Logo
Book 1

ಸಹಜ ಬೇಸಾಯ ಹೆಜ್ಜೆ ಗುರುತುಗಳು

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲೂಕು ಸಂತೇಶಿವರ ಗ್ರಾಮದ ಬಸವರಾಜು. ಬಿ. ಅವರು ಸಹಜ ಬೇಸಾಯದಲ್ಲಿ ತೋಟ ಕಟ್ಟಿದ ಸುದೀರ್ಘ ಕಥನ ಇಲ್ಲಿ ಮೂಡಿ ಬಂದಿದೆ. ಭಾಗ- 1ರಲ್ಲಿ ಚಿಕ್ಕನಾಯ್ಕನಹಳ್ಳಿಯ ಪ್ರಾರಂಭದ ದಿನಗಳ ಅವರ ಕೃಷಿ ಬದುಕು ಮತ್ತು ಬೇಸಾಯ ಕ್ರಮಗಳ ಅನುಭವ 2 ಅಧ್ಯಾಯಗಳಲ್ಲಿ ವಿಸೃತವಾಗಿ ಮೂಡಿ ಬಂದಿದೆ. ಭಾಗ-2 ಸಂತೇಶಿವರದಲ್ಲಿ ಪ್ರಾರಂಭದಿಂದಲೇ ಸಹಜ ಬೇಸಾಯದಲ್ಲಿ ಕಟ್ಟಿದ ಬಹುಬೆಳೆ ತೋಟದ ಸುತ್ತಾ 6 ಅಧ್ಯಾಯಗಳನ್ನು ಒಳಗೊಂಡಿದೆ. ಭಾಗ-3 ರಲ್ಲಿ ಬೇಸಾಯದ ಮಿತ್ರರು, ಅಭಿಮಾನಿಗಳ ಕಣ್ಣಲ್ಲಿ ಮೂಡಿಬಂದ ಬಸವರಾಜು ಅವರ ಆಪ್ತ ಚಿತ್ರಣ ಇದೆ. ಸಹಜ ಕೃಷಿಯಲ್ಲಿ ಹೊಸದಾಗಿ ತೋಟ ಕಟ್ಟ ಬಯಸುವವರಿಗೂ, ಈಗಾಗಲೇ ತೋಟ ಕಟ್ಟಿ ಹಲವು ಸಮಸ್ಯೆಗಳಲ್ಲಿ ಸಿಕ್ಕಿಕೊಂಡಿರುವವರಿಗೂ ಈ ಪುಸ್ತಕ ಆಪ್ತ ಸಮಾಲೋಚನೆಯಂತಿದೆ.

Book 2

ಬೇಸಾಯದ ಕಲೆ- ಸಂಮೃದ್ಧ ಕೃಷಿ ಪ್ರಯೋಗಗಳು

ಬೆಳಗಾಂ ಜಿಲ್ಲೆ ಚಿಕ್ಕೋಡಿ ತಾಲೂಕು ಬೇಡಕಿಹಾಳ್ ನ ಹೆಸರಾಂತ ಸಹಜ ಕೃಷಿಕ ಸುರೇಶ ದೇಸಾಯಿ ಅವರ 40 ವರ್ಷಗಳ ಕೃಷಿ ಸಂಶೋಧನೆ ಇಲ್ಲಿ 7 ಅಧ್ಯಾಯಗಳಲ್ಲಿ ಮೂಡಿಬಂದಿದೆ. ಕೃಷಿಯಲ್ಲಿ ಪಂಚಮಹಾಭೂತಗಳ ಪಾತ್ರವನ್ನು ಅರಿತು ಮಾಡಿದಾಗ ಉತ್ಪಾದನೆ ಹಲವು ಪಟ್ಟು ಹೇಗೆ ಹೆಚ್ಚುತ್ತದೆ ಎಂಬುದನ್ನು ಸುರೇಶ ದೇಸಾಯಿಯವರ ಸಂಶೋಧನೆಗಳು ಕಲಿಸಿಕೊಡುತ್ತವೆ. ಆರೋಗ್ರೀನ್ ಎನ್ನುವ ಬಹುಧಾನ್ಯಗಳ ಹಸಿರು ಗೊಬ್ಬರದ ಚಮತ್ಕಾರವನ್ನೂ ಒಳಗೊಂಡಂತೆ ಇನ್ನೂ ಹಲವು ಚಮತ್ಕಾರಿಕ ವಿಚಾರಗಳು ಇಲ್ಲಿವೆ. ಕಣ್ಣು ತೆರೆಸುವ ಕೃಷಿ ವಿಚಾರಗಳಿಂದ ಈ ಪುಸ್ತಕ ಶ್ರೀಮಂತವಾಗಿದೆ.

Book 3

ಅರಣ್ಯೇ ನಿನಗೆ ಶರಣು

ಕರ್ನಾಟಕದ ಅರಣ್ಯದ ವಿಶ್ವಕೋಶವೇ ಆಗಿರುವ, ಅದೆಷ್ಟೋ ಬರಡುಭೂಮಿಗಳಲ್ಲಿ ಕಾಡು ಕಟ್ಟಿ ಕೃತಾರ್ಥರಾದ ಖ್ಯಾತ ಪರಿಸರವಾದಿ ಅ.ನಾ.ಯಲ್ಲಪ್ಪರೆಡ್ಡಿಯವರು ರೈತರಿಗೆಂದೇ ಬರೆದ ಲೇಖನಗಳು ಇಲ್ಲಿವೆ. ’ಸಹಜ ಸಾಗುವಳಿ’ ಪತ್ರಿಕೆಯಲ್ಲಿ ’ಅರಣ್ಯೇ ನಿನಗೆ ಶರಣು’ ಲೇಖನಮಾಲಿಕೆಯಲ್ಲಿ ಮೊದಲು ಪ್ರಕಟಗೊಂಡ 17 ಲೇಖನಗಳು ಇಲ್ಲಿ ’ಅರಣ್ಯಾಂತರಂಗ’, ’ವಿದ್ಯಮಾನ-ವಿಶ್ಲೇಷಣೆ’ ಮತ್ತು ’ವೈವಿಧ್ಯ’ಗಳೆಂಬ ಮೂರು ಭಾಗಗಳಲ್ಲಿ ಹರಡಿಕೊಂಡಿವೆ. ರೈತರಿಗೆ ಮರಗಳ ಬಗ್ಗೆ ಪ್ರೀತಿ,ಕುತೂಹಲ ಹುಟ್ಟಿಸುವಂತಹ ಮಾಹಿತಿ ಪೂರ್ಣ ವಿಶಿಷ್ಟ ನಿರೂಪಣಾ ಶೈಲಿ ಯಲ್ಲಪ್ಪರೆಡ್ಡಿ ಅವರದ್ದು. ರೈತರ ಮತ್ತು ಯಲ್ಲಪ್ಪರೆಡ್ಡಿಯವರ ಜೊತೆ ಬೆಸುಗೆಯ ಕೊಂಡಿಯಾಗಿದೆ ಈ ಪುಸ್ತಕ.

Book 4

ಪರ್ಮಾಕಲ್ಚರ್ – ಶಾಶ್ವತ ಕೃಷಿ

ಆಸ್ಟ್ರೇಲಿಯಾ ಮೂಲದ ಬಿಲ್ ಮೊಲ್ಲಿಸನ್ ಅವರ ತತ್ವ ಮತ್ತು ಪ್ರಯೋಗವನ್ನು ಆಧರಿಸಿದ್ದು ’ಪರ್ಮಾಕಲ್ಚರ್’. ಅದನ್ನು ಪೂರ್ವದ ದೇಶಗಳ ಅದರಲ್ಲೂ ಭಾರತದ ಸನ್ನಿವೇಶಕ್ಕೆ ಒಗ್ಗಿಸಿದವರು ಪಶ್ಚಿಮ ಬಂಗಾಳದ ಅರ್ಧೇಂದು ಚಟರ್ಜಿಯವರು. ಅವರು ’ಇಕ್ರಾ’ ಆಹ್ವಾನದ ಮೇರೆಗೆ ಕರ್ನಾಟಕದಲ್ಲಿ ನಡೆಸಿಕೊಡುತ್ತಾ ಬಂದಿರುವ ತರಬೇತಿ ಕಾರ್ಯಕ್ರಮಗಳನ್ನು ಆಧರಿಸಿ ವಿ. ಗಾಯತ್ರಿಯವರು ಸಿದ್ಧಪಡಿಸಿದ ಸಮಗ್ರ ’ಪರ್ಮಾಕಲ್ಚರ್’ ಪುಸ್ತಕ ಇದಾಗಿದೆ. ಮೊದಲನೇ ಭಾಗದ 10 ಅಧ್ಯಾಯಗಳು ’ಪರ್ಮಾಕಲ್ಚರ್’ ನ ವಿವಿಧ ಆಯಾಮಗಳ, ತತ್ವಗಳ ಸಮಗ್ರ ಪರಿಚಯ ಮಾಡಿಸುತ್ತದೆ. ಪ್ರಾಯೋಗಿಕ ಪೂರಕ ಮಾಹಿತಿ ಕೊಡುವ ಎರಡನೇ ಭಾಗದಲ್ಲಿ 4 ಅಧ್ಯಾಯಗಳಿವೆ. ಕೊನೆಯಲ್ಲಿ ಪರ್ಮಾಕಲ್ಚರ್ ಕುರಿತ ಪ್ರಪಂಚದ 10 ಮಹತ್ವದ ಪುಸ್ತಕಗಳನ್ನು ಪರಿಚಯಿಲಾಗಿದೆ. ಅದ್ಭುತ ಕಲಾವಿದರೂ ಆಗಿರುವ ಅರ್ಧೇಂದು ಚಟರ್ಜಿಯವರೇ ಸ್ವತಃ ರಚಿಸಿದ ಚಿತ್ರಗಳ ಜೊತೆಗೆ ವಿವಿಧ ಮೂಲಗಳಿಂದ ಹೆಕ್ಕಿ ತೆಗೆದ ಚಿತ್ರಗಳಿಂದ ಪುಸ್ತಕ ಕಳೆಗಟ್ಟಿದೆ.

Book 5

ಸುಸ್ಥಿರ ಕೃಷಿ ಪಾಠಗಳು

ಕರ್ನಾಟಕದ ಸಾವಯವ ಕೃಷಿ ಪಿತಾಮಹ ಎಂದೇ ಹೆಸರಾದ ಎಲ್.ನಾರಾಯಣ ರೆಡ್ಡಿ ಅವರ ಸಾವಯವ ಕೃಷಿ ವಿಚಾರಧಾರೆಯನ್ನು ಹೊತ್ತು ತರುವ ಪುಸ್ತಕ. ನಾರಾಯಣ ರೆಡ್ಡಿಯವರು ನಡೆಸಿಕೊಡುತ್ತಿದ್ದ ತರಬೇತಿ ಕಾರ್ಯಕ್ರಮಗಳು ಮತ್ತು ಹಲವಾರು ವೀಡಿಯೋಗಳನ್ನು ಪ್ರಶಾಂತ್ ಜಯರಾಂ ಅವರು ಭಟ್ಟಿಯಿಳಿಸಿ ಅಕ್ಷರ ರೂಪಕ್ಕೆ ತಂದಿದ್ದಾರೆ. ಅದನ್ನು ಪರಿಷ್ಕರಿಸಿ ಪುಸ್ತಕ ರೂಪ ಕೊಟ್ಟಿದ್ದಾರೆ ವಿ.ಗಾಯತ್ರಿ. 7 ಅಧ್ಯಾಯಗಳು, 2 ಅನುಬಂಧಗಳನ್ನು ಹೊಂದಿರುವ ಪುಸ್ತಕ ನಾರಾಯಣ ರೆಡ್ಡಿ ಮತ್ತು ಅವರ ಕೃಷಿಗೆ ಸಂಬಂಧಪಟ್ಟ ಅಪರೂಪದ ಚಿತ್ರಗಳ ಸಂಗ್ರಹವೂ ಆಗಿದೆ.

Book 6

ಹೀಗೊಂದು ಕೃಷಿ ಸಂಹಿತೆ

ಆಧುನಿಕ ರಾಸಾಯನಿಕ ಕೃಷಿಯ ಲೋಪದೋಷಗಳನ್ನು 1920ರ ದಶಕದಲ್ಲೇ ಎತ್ತಿ ತೋರಿಸಿದ ಧೀಮಂತ ಸರ್ ಆಲ್ಬರ್ಟ್ ಹೋವರ್ಡ್. ಬ್ರಿಟಿಷ್ ಮೂಲದ ಹೋವರ್ಡ್ ಅವರು ಮಧ್ಯಪ್ರದೇಶದ ಪೂಸಾ ಕೃಷಿ ವಿಶ್ವವಿದ್ಯಾಲಯದಲ್ಲಿ ನೆಲೆಸಿ, ಭಾರತೀಯ ಕೃಷಿ ಪದ್ಧತಿಗಳನ್ನು ಅರ್ಥ ಮಾಡಿಕೊಂಡು, ಮಣ್ಣಿನ ಆರೋಗ್ಯದ ಬಗ್ಗೆ ಕೆಲಸ ಮಾಡುತ್ತಾರೆ. ಆಧುನಿಕ ಕೃಷಿ ವಿಜ್ಞಾನದಲ್ಲಿ ಭಸ್ಮಾಸುರರಂತೆ ಸೇರಿಕೊಂಡಿರುವ ವಿವಿಧ ತಜ್ಞರು, ವಿವಿಧ ಜೀವಿ ನಾಶಕಗಳನ್ನು ದೂರವಿಡದ ಹೊರತು ಭಾರತೀಯ ಕೃಷಿಗೆ ಉಳಿಗಾಲವಿಲ್ಲ ಎನ್ನುವ ವಿಚಾರಧಾರೆಯ ಮೇಲೆ ನಿಂತಿರುವ ಹೋವರ್ಡ್ ಅವರ ಲೇಖನಗಳು, ಮಣ್ಣಿನ ಜೀವಿಗಳು ಮತ್ತು ಬೆಳೆಗಳ ಜೊತೆಗಿನ ಅವಿನಾಭಾವ ಸಂಬಂಧವನ್ನು ವೈಜ್ಞಾನಿಕವಾಗಿ ವಿವರಿಸುತ್ತದೆ. ಕಂಪೊಸ್ಟ್ ತಯಾರಿಕೆಯಲ್ಲಿ ಇವರ ಸಂಶೋಧನೆಯ ಇಂಡೋರ್ ವಿಧಾನ ಇವತ್ತಿಗೂ ಅತ್ಯುತ್ತಮ, ಪರಿಪೂರ್ಣ ವಿಧಾನವೆಂದು ಪರಿಗಣಿತವಾಗಿದೆ. 15 ಅಧ್ಯಾಯಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ವಾಲ್ಮೀಕಿ ಶ್ರೀನಿವಾಸ ಅಯ್ಯಂಗಾರ್ಯ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.

Book 7

ಸಕಲರಿಗೂ ಸಂಮೃದ್ಧಿ

’ಈ ಭೂಮಿಯ ಮೇಲೆ ಕಿಂಚಿತ್ತೂ ಬರಡು ನೆಲವನ್ನು, ಒಂದೂ ಬರಡು ಮನಸ್ಸನ್ನು ಇರಗೊಡೆವು’ ಎನ್ನುತ್ತಾ ರೈತರ ’ಪ್ರಯೋಗ ಪರಿವಾರ’ಗಳನ್ನು ರಚಿಸಿ ಕಾಲೆಕರೆ ಜಮೀನಿನಲ್ಲಿ ಸುಖೀ ಸಂಸಾರದ ಸೂತ್ರವನ್ನು ರಚಿಸಿಕೊಟ್ಟ ಧೀಮಂತ ಪ್ರೊ.ಶ್ರೀಪಾದ ಡಾಬೊಲ್ಕರ್ ಅವರ ’ಪ್ಲೆಂಟಿ ಫಾರ್ ಆಲ್’ ಪುಸ್ತಕದ ಅನುವಾದಿತ ಕೃತಿ. ಆರ್. ಶೈಲಜಾ ಅನುವಾದಿಸಿದ್ದಾರೆ. ಪ್ರಾಕ್- ಪರಿಸರ ಬೇಸಾಯ(ನ್ಯಾಚೆಕೋ ಫಾರ್ಮಿಂಗ್), ನರ್ಸರಿ ಸಾಯಿಲ್ ಮುಂತಾದ ಆಸಕ್ತಿಯುತ ಪರಿಕಲ್ಪನೆಗಳನ್ನು ಹುಟ್ಟು ಹಾಕಿ ಇಂಚಿಂಚು ಭೂಮಿಯನ್ನೂ, ಸಂಪೂರ್ಣ ಸೂರ್ಯಪ್ರಕಾಶವನ್ನೂ ಬಳಕೆ ಮಾಡಿಕೊಂಡು ಸಂಮೃದ್ಧ ಕೃಷಿ ಮಾಡುವ ದಾರಿಯನ್ನು ತೋರಿಸಿಕೊಟ್ಟವರು ಪ್ರೊ. ಡಾಬೊಲ್ಕರ್. ಕೃಷಿಯಲ್ಲಿ ಗಣಿತದ ಲೆಕ್ಕಾಚಾರವನ್ನು ಅಳವಡಿಸಿ, ಅಗೋಚರ ಪ್ರಕೃತಿಯ ವಿದ್ಯಮಾನಗಳನ್ನು ಹಿಡಿದಿಟ್ಟು ಕೃಷಿಯಲ್ಲಿ ಅಳವಡಿಸಿದ ಧೀಮಂತರು.

Book 8

ಬದುಕು ಬೇಸಾಯ

ಗದಗ್ ಜಿಲ್ಲೆ ಶಿರಹಟ್ಟಿ ತಾಲೂಕು ಎಳವತ್ತಿ ಗ್ರಾಮದ ಧೀಮಂತ ಸಾವಯವ ಕೃಷಿಕ ಡಿ. ಡಿ. ಭರಮಗೌಡ್ರ ಅವರ ಜೀವನ ಚರಿತ್ರೆಯ ಮೂಲಕ ಉತ್ತರ ಕರ್ನಾಟಕದ ಕೃಷಿ ಚರಿತ್ರೆಯನ್ನು ಹಸಿರು ಕ್ರಾಂತಿಯ ಮುಂಚಿನ ಸಮಯದಿಂದಲೂ ಹಿಡಿದಿಡುವ ಸಮಗ್ರ ಕೃತಿ ಇದಾಗಿದೆ. ತಮ್ಮ ಪ್ರದೇಶಕ್ಕೆ ರಾಸಾಯನಿಕ ಕೃಷಿಯನ್ನು ತಂದ ಅಗ್ರಗಣ್ಯರ ಸಾಲಿನಲ್ಲಿ ನಿಲ್ಲುವ ಭರಮಗೌಡ್ರ ಅವರು ನಂತರ ಪರ್ಯಾಯದ ಹುಡುಕಾಟದಲ್ಲಿ ತೊಡಗಿ ಈ ನಾಡುಕಂಡ ಅತ್ಯುತ್ತಮ ಸಾವಯವ ಕೃಷಿಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗುವ ಅವರ ಮಹಾನ್ ಪಯಣದ ಜಾಡು ಹಿಡಿದು ಹೊರಟಿದೆ ಈ ಕೃತಿ. ಭಾಗ-1– ’ಬದುಕು’ ಒಟ್ಟು 4 ಅಧ್ಯಾಯಗಳನ್ನು ಒಳಗೊಂಡಿದ್ದರೆ ಭಾಗ-2 ’ಬೇಸಾಯ’ ಭರಮಗೌಡ್ರ ಅವರ ಕೃಷಿ ಜ್ಞಾನ ಬತ್ತಳಿಕೆಯಿಂದ ಹೊರಟ 20 ಲೇಖನಗಳನ್ನು ಒಳಗೊಂಡಿದೆ. ಕೊನೆಯಲ್ಲಿ ಅಪರೂಪದ ಸಂದರ್ಭಗಳ ಚಿತ್ರಪಟವಿದೆ. 2016 ರ ಸಾಲಿನ ಉತ್ತರ ಕರ್ನಾಟಕ ಲೇಖಕಿಯರ ಸಂಘದ ಇನ್ಫೋಸಿಸ್ ಸ್ಥಾಪಿತ ಪ್ರಶಸ್ತಿ ಇದರ ನಿರೂಪಕಿ ವಿ. ಗಾಯತ್ರಿ ಅವರಿಗೆ ದೊರೆತಿದೆ.

Book 9

ಸಹಜ ಕೃಷಿಯೊಂದಿಗೆ ನನ್ನ ಬದುಕು

ನಾಡಿನ ಸರ್ವಶ್ರೇಷ್ಠ ಸಹಜ ಕೃಷಿಕ ಸುಭಾಷ್ ಶರ್ಮ ಅವರ ಆತ್ಮಕಥನ ನಿರೂಪಣೆ : ವಿ ಗಾಯತ್ರಿ ಪ್ರಕಾಶನ : ಇನ್ಸ್ಟಿಟ್ಯೂಟ್ ಫಾರ್ ಕಲ್ಚರಲ್ ರೆಸೆರ್ಚ್ ಅಂಡ್ ಆಕ್ಷನ್ (ಇಕ್ರಾ)

Book 10

ಸಾವಯವ ಕೃಷಿಗೆ ಸಜೀವ ಮಣ್ಣು

ಉಷ್ಣವಲಯದ ಮಣ್ಣುಗಳ ವೈಶಿಷ್ಟ್ಯತೆಯನ್ನು ತಿಳಿಸಿಕೊಡುವ ಮೂರು ಮಹತ್ವದ ಲೇಖನಗಳ ಸಂಗ್ರಹ. ಭಾರತೀಯ ಪರಿಸರ ತಜ್ಞರಲ್ಲಿ ಪ್ರಮುಖರೂ, ಹಿರಿಯರೂ ಆದ ಸೈಲೇಂದ್ರನಾಥ್ ಘೋಷ್, ಕೃಷಿಯಲ್ಲಿ ಗಣಿತದ ಲೆಕ್ಕಾಚಾರವನ್ನು ಅಳವಡಿಸಿ, ಅಗೋಚರ ಪ್ರಕೃತಿಯ ವಿದ್ಯಮಾನಗಳನ್ನು ಹಿಡಿದಿಟ್ಟು ಕೃಷಿಯಲ್ಲಿ ಅಳವಡಿಸಿದ ಧೀಮಂತ ಪ್ರೊ.ಶ್ರೀಪಾದ ಡಾಬೋಲ್ಕರ್, ಸಮಶೀತೋಷ್ಣ ವಲಯದ ಮಣ್ಣುಗಳಿಗೂ- ಉಷ್ಣ ವಲಯದ ಮಣ್ಣುಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ವೈಜ್ಞಾನಿಕವಾಗಿ ತೋರಿಸಿಕೊಡುವ ಕ್ಲಾಡ್ ಬೂರ್ಗ್ವಿಜ್ನಾನ್ ಇವರುಗಳ ಮಹತ್ವಪೂರ್ಣ ಲೇಖನಗಳು ಇಲ್ಲಿವೆ. ಅನುವಾದ ಆರ್. ಶೈಲಜಾ ಅವರದ್ದು.

Book 11

ಸಾವಯವ ಬೇಸಾಯದ ರೀತಿ ರಿವಾಜು

ಬೆಲ್ಜಿಯಂ ಮೂಲದ ಬರ್ನಾಡ್ ಡಿ ಕ್ಲರ್ಕ್ ಭಾರತೀಯ ಸಾವಯವ ಕೃಷಿ ಚಳವಳಿಯ ಮುಂಚೂಣಿಯಲ್ಲಿರುವವರು. ಶ್ರೀ ಅರಬಿಂದೋ ಮತ್ತು ಮದರ್ ಅವರ ವಿಚಾರಗಳಿಂದ ಪ್ರಭಾವಿತರಾಗಿ ವಿದ್ಯಾರ್ಥಿ ದೆಸೆಯಲ್ಲಿಯೇ ಪಾಂಡಿಚರಿಯ ಆರೋವಿಲ್ ಗೆ ಬಂದು ನೆಲೆಸಿದವರು. ಬರಡು ಮಣ್ಣುಗಳು, ಬರಡು ಜಮೀನುಗಳಲ್ಲಿ ಕೆಲಸ ಮಾಡುತ್ತಾ ಪರ್ಯಾಯ ಕೃಷಿ ಚಿಂತನೆ ಮತ್ತು ಪ್ರಯೋಗಗಳನ್ನು ಮೈಗೂಡಿಸಿಕೊಳ್ಳುತ್ತಾರೆ. ಅವರ ಅನುಭವದ ಮೂಸೆಯಿಂದ ಹೊರಬಂದ 5 ಲೇಖನಗಳು ಈ ಪುಸ್ತಕದಲ್ಲಿದೆ. ಬರಡು ಭೂಮಿಯಲ್ಲಿ ಹಂತಹಂತವಾಗಿ ಸಾವಯವ ಕೃಷಿ ಕಟ್ಟುವ ವಿಧಾನಗಳನ್ನು ಹೊಂದಿರುವ ಈ ಲೇಖನಗಳು ರೈತರಿಗೆ ಮಾರ್ಗದರ್ಶಕವಾಗಿವೆ. ಬರ್ನಾಡ್ ಅವರ ಆಯ್ದ ಲೇಖಗಳನ್ನು ಆರ್. ಶೈಲಜಾ ಅನುವಾದಿಸಿದ್ದಾರೆ.

Book 12

ಪುಟ್ಟೀರಮ್ಮನ ಪುರಾಣ

ಈ ನಾಡಿನ ಸಂಮೃದ್ಧ ಕೃಷಿಯನ್ನು ಕಟ್ಟಿದ ಧೀಮಂತ ಮಹಿಳೆಯರ ಸಾಲಿನಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಚಾಮರಾಜನಗರ ತಾಲೂಕು ಪಣ್ಯದ ಹುಂಡಿ ಗ್ರಾಮದ ಪುಟ್ಟೀರಮ್ಮ ಅವರ ಸಂದರ್ಶನ ಆಧಾರಿತ ಕೃತಿ. ಆ ಪ್ರದೇಶದ ಕೃಷಿಯ ಮತ್ತು ಜೀವ ವೈವಿಧ್ಯತೆಯ ಬಗ್ಗೆ ಪುಟ್ಟೀರಮ್ಮ ಅವರ ಅಸಾಧಾರಣ ತಿಳುವಳಿಕೆ ಮತ್ತು ಸಮಷ್ಟಿ ಪ್ರಜ್ನೆ ಊಹೆಗೂ ನಿಲುಕದ್ದು. ಮಿಶ್ರ ಬೆಳೆ ಪದ್ಧತಿಗಳು, ಬಿತ್ತನೆ ಕ್ರಮ, ಬೀಜಗಳನ್ನು ಕಾಪಾಡುವ ವಿಧಾನಗಳು ಮತ್ತು ತಾವು ಕೊಯ್ಯುವ 100 ಬಗೆಯ ಬೆರೆಕೆ ಸೊಪ್ಪಿನ ವಿಸ್ಮಯ ಲೋಕವನ್ನು ಅನಾವರಣಗೊಳಿಸುವ ರೀತಿ ಅವರದ್ದೇ ಸ್ವಂತ ಧ್ವನಿಯಲ್ಲಿ ಮೂಡಿಬಂದಿದೆ. ಅದನ್ನು ಇಲ್ಲಿ ಓದಿಯೇ ಅನುಭವಿಸಬೇಕು.

Book 13

ಜೀವಚೈತನ್ಯ ಕೃಷಿ

ಸಾವಯವ ಕೃಷಿ ಮಾಡುತ್ತಿದ್ದಾಗ್ಯೂ ನಮ್ಮ ಬೆಳೆಗಳೇಕೆ ಆರೋಗ್ಯಕರವಾಗಿಲ್ಲ, ಮಣ್ಣೇಕೆ ಫಲವತ್ತಾಗಿಲ್ಲ ಎಂಬ ಆಸ್ಟ್ರಿಯಾ ದೇಶದ ರೈತರ ಪ್ರಶ್ನೆಗೆ ಉತ್ತರವಾಗಿ ಮಹಾನ್ ದಾರ್ಶನಿಕ ರುಡೋಲ್ಫ್ ಸ್ಟೀನರ್ 1920 ರಲ್ಲಿ 8 ಉಪನ್ಯಾಸಗಳನ್ನು ನೀಡುತ್ತಾರೆ. ಅದೇ ಜೀವಚೈತನ್ಯ ಕೃಷಿ. ಸೈದ್ಧಾಂತಿಕ ಮತ್ತು ಪ್ರಾಯೋಗಿಕಗಳೆರಡರ ಹದವಾದ ಮಿಶ್ರಣವಾದ ಈ ಉಪನ್ಯಾಸಗಳಲ್ಲಿ ವಿವಿಧ ತಯಾರಿಕೆಗಳಿದ್ದು ಆಕಾಶೀಯ ಶಕ್ತಿಗಳ ಜೊತೆ ಮಣ್ಣಿಗೆ ಸಂಪರ್ಕ ಬೆಸೆಯುವ ವಿಧಾನಗಳಿವೆ. ಜೀವಚೈತನ್ಯ ಕೃಷಿಯನ್ನು ಭಾರತದಲ್ಲಿ ಪಸರಿಸಿದ ನ್ಯೂಜಿಲೆಂಡ್ ಮೂಲದ ಪೀಟರ್ ಪ್ರಾಕ್ಟರ್ ಅವರು ರುಡೋಲ್ಫ್ ಸ್ಟೀನರ್ ಅವರ 8 ಉಪನ್ಯಾಸಗಳನ್ನು ಸರಳವಾಗಿ ಜನಸಮೂಹಕ್ಕೆ ತಲುಪಿಸಿದ ಧೀಮಂತರು. ಅವರ ಇಂಗ್ಲಿಷ್ ಪುಸ್ತಕ ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಧರಿಸಿ ಈ ಕನ್ನಡ ಪುಸ್ತಕವನ್ನು ಸಿದ್ಧಪಡಿಸಲಾಗಿದೆ. ಒಟ್ಟು 10 ಅಧ್ಯಾಯಗಳನ್ನು ಒಳಗೊಂಡಿರುವ ಈ ಪುಸ್ತಕ ಜೀವಚೈತನ್ಯ ಕೃಷಿ ಹರಿಕಾರರಾದ ಜೈಸನ್ ಜೆರೋಮ್, ಸುಜಿತ್ ಚಕ್ರವರ್ತಿ ಅವರ ತರಬೇತಿಯ ಮಹತ್ವದ ಭಾಗಗಳನ್ನೂ ಒಳಗೊಂಡಿದೆ.

Book 14

ಸಾವಯವ ಸಸ್ಯ ಸಂರಕ್ಷಣೆಗೆ ಸರಳ ಸೂತ್ರಗಳು

ನಾರಾಯಣರೆಡ್ಡಿ ಮತ್ತು ಅವರಂತಹ ಇನ್ನೂ ಅನೇಕ ಧೀಮಂತರಿಂದ ಸಾವಯವ ಕೃಷಿ ಕಲಿತೆ ಎಂದು ಹೇಳಿಕೊಳ್ಳುವ ತಮಿಳುನಾಡಿನ ಸತ್ಯಮಂಗಲಂನ ಹೆಸರಾಂತ ಸಾವಯವ ಕೃಷಿಕ ಎಸ್. ಆರ್. ಸುಂದರ್ ರಾಮನ್ ಅವರು ಸಾಧನೆಯ ಹಾದಿಯಲ್ಲಿ ಆ ಗುರುಗಳನ್ನೆಲ್ಲಾ ದಾಟಿ ಬಹು ಮುಂದೆ ನಡೆದವರು. ಇವರ ಮೂರು-ನಾಲ್ಕು ದಶಕಗಳ ತಮ್ಮ ಸಾವಯವ ಕೃಷಿ ಪಯಣದ ಪ್ರತಿ ದಿನವೂ ಹೊಸತೊಂದು ಸಂಶೋಧನೆಯ ಹುಟ್ಟು. ನಿರಂತರ ಸಂಶೋಧನೆ-ಪ್ರಯೋಗಗಳಿಂದ ೫ ದ್ರಾವಣಗಳಲ್ಲಿ ಪಾರಂಗತಿ ಪಡೆದಿದ್ದಾರೆ. ಸದಾ ಜನರ ಮಧ್ಯೆ ಬೆರೆತು ಹೋಗಿರುವ ಸುಂದರ್ ರಾಮನ್ ಅವರು ತಮ್ಮ ಸಂಶೋಧನೆಯ ದ್ರಾವಣಗಳ ತಯಾರಿಕೆ ಮತ್ತು ಬಳಕೆಯ ಬಗ್ಗೆ ರಾಜ್ಯ-ರಾಜ್ಯಗಳ ನಡುವೆ ಬಿಡುವಿಲ್ಲದಂತೆ ಓಡಾಡುತ್ತಾ ಪ್ರಾತ್ಯಕ್ಷಿಕೆಗಳನ್ನು ನಡೆಸಿಕೊಡುತ್ತಾರೆ. ಈ ದೇಶದ ಯಾವುದೇ ಭಾಗದಲ್ಲಿ ಬೆಳೆಯುವ ಯಾವುದೇ ಬೆಳೆಯ ಸಂಮೃದ್ಧ ಸಾವಯವ ಕೃಷಿಗೆ ಸುಂದರ್ ರಾಮನ್ ಅವರಲ್ಲಿ ಸರಳ ಸೂತ್ರವಿದೆ. ಅವರ ಪ್ರಾತ್ಯಕ್ಷಿಯ ಸಂದರ್ಭದಲ್ಲೇ ದಾಖಲಿಸಿ ಭಟ್ಟಿ ಇಳಿಸಿ ಸಿದ್ಧಪಡಿಸಿದ ಈ ಪುಸ್ತಿಕೆ ಸುಂದರ್ ರಾಮನ್ ಅವರ ಸಂಶೋಧನೆಯ ದ್ರಾವಣಗಳಿಗೆ ಕೈಪಿಡಿಯಾಗಿದೆ. ಸ್ವತಃ ಸುಂದರ್ ರಾಮನ್ ಅವರೇ ಪಕ್ಕದಲ್ಲಿ ನಿಂತು ಹೇಳಿಕೊಡುತ್ತಿರುವ ಅನುಭವ ಇಲ್ಲಿ ಸಿಗುತ್ತದೆ.

Book 15

ತೆರೆಮರೆಯ ಸತ್ಯಕತೆ

ಕೃಷಿಯಲ್ಲಿ ಕುಲಾಂತರಿ(ಜಿಎಂಒ) ಬೆಳೆಗಳ ಅಪಾಯವನ್ನು ಹೇಳುವ ಕೃತಿ. ಬಹುರಾಷ್ಟ್ರೀಯ ಕಂಪನಿಗಳು ಕೇವಲ ಹಣದಾಸೆಗಾಗಿ ಈ ಅಪಾಯಕಾರಿ ತಂತ್ರಜ್ಞಾನವನ್ನು ನಮ್ಮಂತಹ ದೇಶಗಳ ಕೃಷಿಯ ಮೇಲೆ ಹೇರುತ್ತಿವೆ. ಮೇಲ್ನೋಟಕ್ಕೆ ಎಲ್ಲಾ ಚನ್ನಾಗಿದೆ ಎಂದು ತೋರಿಸಿಕೊಳ್ಳುವ ಇದರ ತೆರೆಮರೆಯಲ್ಲಿ ದೊಡ್ಡ ಹುನ್ನಾರಗಳೇ ನಡೆಯುತ್ತಿವೆ. ಈ ಹುನ್ನಾರವನ್ನು ಬಯಲಿಗೆಳೆಯುವ ಮೂರು ಮುಖ್ಯ ಉಪನ್ಯಾಸಗಳನ್ನು ಆಧರಿತ ಲೇಖನಗಳ ಸಂಗ್ರಹ ಇಲ್ಲಿದೆ.